ರಾಷ್ಟ್ರೀಯ ಬಸವ ಸೇನಾ

ರಾಷ್ಟ್ರೀಯ ಬಸವ ಸೇನಾ ಸಂಘಟನೆಯನ್ನು 12ನೇ ಶತಮಾನದಲ್ಲಿ ಮಹತ್ತರ ಸಾಮಾಜಿಕ ಕ್ರಾಂತಿಯನ್ನುಂಟು ಮಾಡಿದ ಭಕ್ತಿ ಬಂಢಾರಿ ಬಸವಣ್ಣ ಸಾರಿದ ತತ್ವಗಳ ಆಧಾರದ ಮೇಲೆ ನವ ಯುವ ಯುಗವನ್ನು ನಿರ್ಮಾಣ ಮಾಡುವ ಹೆಗ್ಗುರಿಯಿಂದ ಸ್ಥಾಪಿಸಲಾಗಿದೆ.

12ನೇ ಶತಮಾನದಲ್ಲಿ ಬಸವಣ್ಣರ ಪರಿಕಲ್ಪನೆಯಲ್ಲಿ ನಡೆದ ಸಾಮಾಜಿಕ ಆಂದೋಲನವು ಸಮಾನತೆಯನ್ನು ಸಾರುವ, ಜಾತಿಯ ಎಲ್ಲೆಯನ್ನು ಮೀರುವ, ಲಿಂಗ ತಾರತಮ್ಯವನ್ನು ಖಂಡಿಸುವ ಹಾಗೂ ಪ್ರಗತಿಪರ ಸಮಾಜದ ಕಲ್ಪನೆಯನ್ನು ಎತ್ತಿ ಹಿಡಿಯುವ ಒಂದು ಬೃಹತ್ ಆಂದೋಲನವಾಗಿತ್ತು. ಅಂದಿನ ದಿನಕ್ಕೆ ಆ ಪರಿಯ ಪ್ರಗತಿಯ ಕಲ್ಪನೆ ಹೊಂದಿದ್ದ ಇನ್ನಾವುದೇ ಚಳುವಳಿ ಜಗತ್ತಿನ ಯಾವುದೇ ಮೂಲೆಯಲ್ಲೂ ಇರಲಿಲ್ಲ.

ಬಸವಣ್ಣರು ಪ್ರಾರಂಭಿಸಿದ ಅನುಭವ ಮಂಟಪದಲ್ಲಿ ಆಧ್ಯಾತ್ಮಿಕ, ಆರ್ಥಿಕ ಹಾಗೂ ಸಾಮಾಜಿಕ ವಿಷಯಗಳನ್ನು ಮುಕ್ತವಾಗಿ ಚರ್ಚಿಸಲಾಗಿತ್ತು. ಬಸವಣ್ಣರ ತತ್ವಗಳಿಂದ ಪ್ರೇರಿತರಾಗಿ ಜಗತ್ತಿಗೆ ಸಮಾನತೆಯ ಸಂದೇಶ ಬಿತ್ತರಿಸಿದ ವಿವಿಧ ಜಾತಿ-ವರ್ಗ-ಪಂಗಡಗಳಿಂದ ಬಂದ ಅಂಬಿಗರ ಚೌಡಯ್ಯ, ಮಾದರ ಚೆನ್ನಯ್ಯ, ಮಡಿವಾಳ ಮಚಿದೇವ, ದೋಹರ ಕಕ್ಕಯ್ಯ ಹಾಗೂ ಇತರ ಶಿವಶರಣರು ಲಿಂಗಾಯತ ಧರ್ಮದ ಸಾಮಾಜಿಕ ಸಮಾನತೆಯ ಕಲ್ಪನೆಗೆ ಸಾಕ್ಷಿಯಾಗಿದ್ದಾರೆ.

ಬಸವಣ್ಣರ ಹಾಗೂ ಶಿವಶರಣರ ತತ್ವಗಳು ಈ ವಿಶ್ವದಲ್ಲಿ ಸೂರ್ಯ-ಚಂದ್ರರಿರುವವರೆಗೆ ಅಮರವಾಗಿರುತ್ತವೆ. ಯಾವುದೇ ಶಕ್ತಿಯಿಂದಲೂ ಅವುಗಳ ನಿರ್ನಾಮ ಸಾಧ್ಯವಿಲ್ಲ. ಕನ್ನಡಿಗರ ಉಸಿರಾಗಿರುವ, ಕನ್ನಡಿಗರಿಂದ ಸ್ಥಾಪಿತವಾಗಿರುವ ಪ್ರಥಮ ಧರ್ಮವಾಗಿ ನಾಡಿನ ಜನರ ಸ್ವಾಭಿಮಾನದ ಪ್ರತೀಕವಾಗಿರುವ ಹಾಗೂ ತ್ರಿವಿಧ ದಾಸೋಹವನ್ನು ಅನುಸರಿಸುವ ಏಕೈಕ ಧರ್ಮವಾಗಿರುವ ಬಸವ ಧರ್ಮ ಇಡೀ ಜಗತ್ತಿಗೆ ಬೆಳಕು ನೀಡುವ ಶಕ್ತಿ ಹೊಂದಿದೆ.

ಈ ಹಿನ್ನೆಲೆಯಲ್ಲಿ, ಬಸವ ರಾಷ್ಟ್ರಿಯ ಸೇನೆಯನ್ನು ಜಾತಿ-ಧರ್ಮದ ಎಲ್ಲೆಗಳನ್ನು ಮೀರಿ ಎಲ್ಲಾ ಕನ್ನಡಿಗರ-ಕರ್ನಾಟಕದ ಜನತೆಯ ಬೃಹತ್ ಸೇನೆಯನ್ನಾಗಿ ಮಾಡುವ ಉದ್ದೇಶವಿದೆ.

ಬನ್ನಿ ರಾಷ್ಟ್ರೀಯ ಬಸವ ಸೇನಾ ಸಂಘಟನೆಯ ಸದಸ್ಯರಾಗಿ. ನವ ಯುವ ಯುಗ ನಿರ್ಮಿಸೋಣ. ಸುಂದರ ಸಮಾಜ ನಿರ್ಮಿಸೋಣ.

Download RBS - Membership Form